ಪುರಿ ಜಗನ್ನಾಥ್ ಮುಂದಿನ ಸಿನಿಮಾದಲ್ಲಿ ಯಶ್ ನಟಿಸುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಪ್ರಿನ್ಸ್ ಮಹೇಶ್ ಬಾಬು ಜತೆಗೆ ಪುರಿ ಜಗನ್ನಾಥ್ ಸಿನಿಮಾ ಮಾಡಲಿದ್ದಾರೆಂದಾಗ ಟಾಲಿವುಡ್‌ನಲ್ಲಿ ಹೆಚ್ಚು ಗಾಸಿಪ್ ಆಗಿದ್ದು ‘ಜನ ಮನ ಗಣ’ ಚಿತ್ರ. ಕೊನೆಗೆ ಅದೆನಾಯ್ತೋ ಗೊತ್ತಿಲ್ಲ. ಆ ಚಿತ್ರದಲ್ಲಿ ಮಹೇಶ್ ಬಾಬು ಅಭಿನಯಿಸುತ್ತಿಲ್ಲ ಎನ್ನುವಾಗಲೇ ಆ ಚಿತ್ರಕ್ಕೆ ತಳುಕು ಹಾಕಿಕೊಂಡಿದ್ದು ಕನ್ನಡ ಸ್ಟಾರ್ ನಟ ಯಶ್ ಹೆಸರು. ನಿರ್ದೇಶಕ ಪುರಿ ಜಗನ್ನಾಥ್ ಮುಖ್ಯ ಪಾತ್ರದಲ್ಲಿ ನಟಿಸಲು ಸೂಕ್ತ ವ್ಯಕ್ತಿಯನ್ನು ಹುಡುಕುತ್ತಿರುವಾಗ ರಾಕಿಂಗ್ ಸ್ಟಾರ್ ಯಶ್ ಅವರನ್ನು ಸಂಪರ್ಕಿಸಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಇದು ಕೆಜಿಎಫ್-ಸ್ಟಾರ್ ಯಶ್ ಅವರ ದೊಡ್ಡ ಬಜೆಟ್ ಚಲನಚಿತ್ರವಾಗಲಿದೆ ಎಂದು ಹೇಳಲಾಗಿತ್ತು ಕೆಜಿಎಫ್ ಚಿತ್ರೀಕರಣ ಮುಗಿಯುತ್ತಿದ್ದಂತೆ ‘ಜನ ಮನ ಗಣ’ ಚಿತ್ರ ಆರಂಭವಾಗಲಿದೆ ಎಂಬ ಗುಸುಗುಸು ಹರಿದಾಡಿತ್ತು. ಆದರೆ ಈಗ ಸುದ್ದಿ ಏನೆಂದರೆ ರಾಕಿಂಗ್ ಸ್ಟಾರ್ ಯಶ್ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆನ್ನುವ ಸುದ್ದಿಗೆ ಬ್ರೇಕ್ ಬಿದ್ದಿದೆ. ಬದಲಿಗೆ ಚಿತ್ರದಲ್ಲಿ ವಿಜಯ್ ದೇವರಕೊಂಡ ನಾಯಕನಾಗಿ ನಟಿಸಲಿದ್ದಾರೆ. ಹೌದು, ನಿರ್ದೇಶಕ ಪೂರಿ ಜಗನ್ನಾಥ್ ಜೊತೆ ಸೌತ್ ಇಂಡಿಯಾದ ಫೇಮಸ್ ನಟ ವಿಜಯ್ ದೇವರಕೊಂಡ ‘ಜನಗಣಮನ’ ಎಂಬ ಸಿನಿಮಾ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.

ಕಳೆದ ದಶಕದಲ್ಲಿ ದೇಶದಲ್ಲಿ ಭೀಕರವಾದ ಕೊಲೆಗಳು, ಅಪರಾಧಗಳು ಮತ್ತು ಅತ್ಯಾಚಾರ ಪ್ರಕರಣಗಳ ಸುತ್ತ ಈ ಕಥೆ ಸುತ್ತುತ್ತದೆ. ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗಲಿದ್ದು, ಹಿಂದಿ ಮತ್ತು ತಮಿಳಿನಲ್ಲಿ ಡಬ್ ಆಗಲಿದೆ ಎನ್ನಲಾಗಿತ್ತು. ಇದೀಗ, ದೇವರಕೊಂಡ ನಾಯಕನಾಗಿರುವುದರಿಂದ ತೆಲುಗಿನಲ್ಲಿ ಸಿದ್ಧವಾಗಿ ಉಳಿದ ಭಾಷೆಗೆ ಡಬ್ ಆಗಬಹುದು.

ಪೂರಿ ಕನೆಕ್ಟ್ಸ್ ಮತ್ತು ಪೂರಿ ಜಗನ್ನಾಥ್ ಟೂರಿಂಗ್ ಟಾಕೀಸ್ ಬ್ಯಾನರ್ ಅಡಿಯಲ್ಲಿ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ನಿರ್ಮಿಸಲಿದ್ದಾರೆ. ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಬರಲಿದ್ದಾರೆನ್ನುವ ಸುದ್ದಿಗಳು ಇವೆ. ಈ ಚಿತ್ರದಲ್ಲಿ ಚಾರ್ಮ್ ಕೌರ್ ಕೂಡ ಮುಖ್ಯ ಪಾತ್ರದಲ್ಲಿದ್ದಾರೆ. ಚಿತ್ರದ ಇತರ ಸ್ಟಾರ್ ಪಾತ್ರವರ್ಗದ ಬಗ್ಗೆ ಯಾವುದೇ ವಿವರಗಳು ಲಭ್ಯವಿಲ್ಲ.