ಕಿರಣ್‌ ರಾಜ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘777 ಚಾರ್ಲಿ’ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜ್ ಶೆಟ್ಟಿ ಅವರ ಹುಟ್ಟುಹಬ್ಬದ ಪ್ರಯುಕ್ತ 777 ಚಾರ್ಲಿ ಚಿತ್ರದಿಂದ ಇಂಟ್ರೆಸ್ಟಿಂಗ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ರಾಜ್ ಅವರು ವೆಟರ್ನರಿ ಡಾಕ್ಟರ್ ಅಶ್ವಿನ್ ಕುಮಾರ್ ಎಂಬ ಪಾತ್ರ ಮಾಡುತ್ತಿದ್ದಾರೆ ಎಂಬದು ತಿಳಿದು ಬಂದಿದೆ.

“ಈ ಪಾತ್ರದ ಕುರಿತು ಬರೆದಾಗ ನನ್ನ ಮುಂದೆ ರಾಜ್ ಬಿ ಶೆಟ್ಟಿ ಹೊರತಾಗಿ ಬೇರೆ ಆಯ್ಕೆಯೇ ಇರಲಿಲ್ಲ. ಅವರಿಗೆ ಈ ಪಾತ್ರದ ಬಗ್ಗೆ ಹೇಳಿದಾಗ ಅವರು ತುಂಬಾ ಖುಷಿಪಟ್ಟರು ಮತ್ತು ಆ ಪಾತ್ರ ಮಾಡುವುದಾಗಿ ಹೇಳಿದರು. ಈ ಸಿನಿಮಾದಲ್ಲಿ ರಾಜ್ ಅವರದ್ದು ಮಹತ್ವದ ಪಾತ್ರ ಆಗಿದ್ದು ಅವರು ತುಂಬಾ ಚೆನ್ನಾಗಿ ನಟಿಸಿದ್ದಾರೆ, ರಕ್ಷಿತ್ ಮತ್ತು ರಾಜ್ ಅವರ ಜೋಡಿ ತೆರೆ ಮೇಲೆ ನೋಡುವುದು ಪ್ರೇಕ್ಷಕರಿಗೆ ಖುಷಿ ಕೊಡುವುದಂತೂ ಸುಳ್ಳಲ್ಲ,” ಎಂದು ನಿರ್ದೇಶಕ ಕಿರಣ್ ರಾಜ್ ಹೇಳುತ್ತಾರೆ.

777 ಚಾರ್ಲಿಯ ತಂಡ ಎರಡನೆ ಭಾಗದ ಚಿತ್ರೀಕರಣಕ್ಕಾಗಿ ಉತ್ತರ ಭಾರತಕ್ಕೆ ಪ್ರಯಾಣ ಬೆಳೆಸಲಿದೆ. ರಕ್ಷಿತ್ ಅವರ ‘ಅವನೇ ಶ್ರೀಮನ್ನಾರಾಯಣ’ ಬಿಡುಗಡೆಯ ದಿನಾಂಕವನ್ನು ಅವಲಂಬಿಸಿ ಚಾರ್ಲಿ ಎರಡನೇ ವೇಳಾಪಟ್ಟಿಯನ್ನು ರಚಿಸಲಾಗುವುದು. ಪುಷ್ಕರ್ ಫಿಲ್ಮ್ಸ್ ಮತ್ತು ಪರಮ್ವಾ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುವ ಈ ಚಿತ್ರದಲ್ಲಿ ನಾಯಕಿಯಾಗಿ ಸಂಗೀತ ನಟಿಸುತ್ತಿದ್ದಾರೆ. ನೋಬಿನ್ ಪಾಲ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ ಚಿತಕ್ಕಿದೆ.