ಕಳೆದ ಐದು ವರ್ಷಗಳಲ್ಲಿ ಯಾವುದೇ ಚಲನಚಿತ್ರಗಳನ್ನು ನಿರ್ದೇಶಿಸದ ರಕ್ಷಿತ್ ಶೆಟ್ಟಿ ಹೊಸ ಚಿತ್ರ ನಿರ್ದೇಶಿಸಲು ಸಜ್ಜಾಗಿದ್ದಾರೆ. ಪ್ರಸ್ತುತ ಅವರು ‘ಅವನೆ ಶ್ರೀಮನ್ನಾರಾಯಣ’ ಮತ್ತು 777 ಚಾರ್ಲಿ ಚಿತ್ರದಲ್ಲಿ ನಿರತರಾಗಿದ್ದಾರೆ. ಆದರೆ ಶೀಘ್ರದಲ್ಲೇ ‘ಪುಣ್ಯಕೋಟಿ’ ಎಂಬ ಹೊಸ ಚಲನಚಿತ್ರವನ್ನು ನಿರ್ದೇಶಿಸಲು ಪ್ರಾರಂಭಿಸುತ್ತಾರೆ. ‘ಉಳಿದವರು ಕಂಡಂತೆ’ ಚಿತ್ರದ ಮೂಲಕ ನಿರ್ದೇಶಕರಾದ ರಕ್ಷಿತ್‌, ಆ ನಂತರ ನಟನೆಯಲ್ಲಿ ಬಿಝಿ ಆದರು ಈಗ ಮತ್ತೆ ಐದು ವರ್ಷದ ನಂತರ ಡೈರೆಕ್ಷನ್ ಮಾಡಲು ಸಜ್ಜಾಗುತ್ತಿದ್ದಾರೆ.

‘ಪುಣ್ಯಕೋಟಿ’ ಸುಮಾರು 100 ಕೋಟಿಯ ದೊಡ್ಡ ಬಜೆಟ್ ಚಿತ್ರವಾಗಿದ್ದು “ಅವನೆ ಶ್ರೀಮನ್ನಾರಾಯಣ” ಬಿಡುಗಡೆಯಾದ ನಂತರ, ‘ಪುಣ್ಯಕೋಟಿ’ ಚಿತ್ರದ ಪೂರ್ವ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸುತ್ತೇನೆ ಎಂದು ರಕ್ಷಿತ್ ಹೇಳಿದ್ದಾರೆ. ಬಹುಕೋಟಿಯ ಚಿತ್ರ ಇದಾಗಿದ್ದು, ಇಂಥದ್ದೊಂದು ಚಿತ್ರವನ್ನು ಮಾಡಲು ಶ್ರೀಮನ್ನಾರಾಯಣ ಚಿತ್ರವು ಧೈರ್ಯ ತುಂಬಿದೆ ಎಂದು ರಕ್ಷಿತ್‌ ಶೆಟ್ಟಿ ತಿಳಿಸಿದ್ದಾರೆ. “ಇದೊಂದು ವಿಶೇಷ ಬಗೆಯ ಚಿತ್ರ. ಪುಣ್ಯಕೋಟಿಯ ಕಥೆಯನ್ನು ಈಗಾಗಲೇ ನಾವು ಕೇಳಿದ್ದೇವೆ. ಅದನ್ನು ನೆನಪಿಸುವಂತಹ ಟೈಟಲ್‌ ಅನ್ನು ನಮ್ಮ ಚಿತ್ರಕ್ಕೆ ಇಡಲು ಕಾರಣವಿದೆ. ಕಥೆಗೂ ಮತ್ತು ಟೈಟಲ್‌ಗೂ ಹೋಲಿಕೆ ಆಗುತ್ತದೆ. ಅದು ಹೇಗೆ ಎನ್ನುವುದನ್ನು ಸಿನಿಮಾದಲ್ಲಿಯೇ ನೋಡಿ,” ಎಂದಿದ್ದಾರೆ ರಕ್ಷಿತ್‌. ಜೊತೆಗೆ ಈ ಸಿನಿಮಾ ಸುಮಾರು 300 ವರ್ಷಗಳ ಹಿಂದಿನ ಕತೆಯಂತೆ. ಹಾಗಾಗಿ 300 ವರ್ಷಗಳ ಹಿಂದಿನ ಬ್ಯಾಗ್ರೌಂಡ್ ನಿರ್ಮಿಸಲು ಸೆಟ್ ಬಗ್ಗೆ ಪ್ಲಾನ್ ಮಾಡುತ್ತಿದ್ದಾರಂತೆ ರಕ್ಷಿತ್. 300 ವರ್ಷಗಳ ಹಳೆಯ ಕಥೆ ಅಂತ ಆದ್ರೆ ಹೇಗಿರಲಿದೆ ಸಿನಿಮಾ ಎನ್ನುವ ಕುತೂಹಲ ಈಗಾಗಲೆ ಅಭಿಮಾನಿಗಳಲ್ಲಿದೆ. ಒಂದು ಯುದ್ಧದ ಸನ್ನಿವೇಶವನ್ನು ಆಧರಿಸಿದ ಸಿನಿಮಾ ಇದಾಗಲಿದೆಯಂತೆ.

ಕಿರಿಕ್ ಪಾರ್ಟಿಯಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಈ ನಟ ಈಗ ಸೆಪ್ಟೆಂಬರ್ಗೆ ಚಿತ್ರಮಂದಿರಗಳಲ್ಲಿ ಬರಲಿರುವ ಅವನೇ ಶ್ರೀಮನ್ನಾರಾಯಣ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಪ್ರಸ್ತುತ ಅವರು 777 ಚಾರ್ಲಿಯ ಚಿತ್ರೀಕರಣದಲ್ಲಿ ಬಿಝಿ ಆಗಿದ್ದಾರೆ.