ಪೈಲ್ವಾನ್ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಮರಾಠಿ, ಪಂಜಾಬಿ, ಭೋಜ್‌ಪುರಿ ಮತ್ತು ಬಂಗಾಳಿ, ಹೀಗೆ ಒಂಬತ್ತು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಸುದೀಪ್‌ನ ಪೈಲ್‌ವಾನ್ 2,500 ಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆಯಾಗಲಿದೆ. ಬಹುನಿರೀಕ್ಷಿತ ಕನ್ನಡ ಚಿತ್ರಗಳಲ್ಲಿ ಒಂದಾದ ಪೈಲ್‌ವಾನ್ ಹಿಂದಿಯಲ್ಲಿ ಪೆಹ್ಲ್ವಾನ್ ಆಗಿ ಬಿಡುಗಡೆಯಾಗಲು ಸಜ್ಜಾಗಿದೆ. ಈ ಸಿನಿಮಾ ಭಾರತ ಮಾತ್ರವಲ್ಲದೆ ನೆರೆ ದೇಶಗಳಾದ ನೇಪಾಳ ಮತ್ತು ಭೂತಾನ್‌ನಲ್ಲೂ ಬಿಡುಗಡೆಯಾಗಲಿದ್ದು ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸುತ್ತಿದೆ.

ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು (ಹಿಂದಿ ವರ್ಷನ್‌) ಭಾರತದ ಅಕ್ಕಪಕ್ಕದ ದೇಶಗಳಲ್ಲಿ ಬಿಡುಗಡೆಯಾಗುತಿದ್ದು ಜತೆಗೆ ಶ್ರೀಲಂಕಾ ಹಾಗೂ ಪಾಕಿಸ್ತಾನದಲ್ಲೂ ಬಿಡುಗಡೆ ಮಾಡುವ ಯೋಜನೆಯನ್ನು ಚಿತ್ರತಂಡ ನಿರ್ಧರಿಸಿದೆ. ಈ ಮೂಲಕ ಕನ್ನಡದ ಮಾರುಕಟ್ಟೆ ಸಾರ್ಕ್‌ ಒಕ್ಕೂಟದ ದೇಶಗಳಿಗೂ ವಿಸ್ತರಿಸುತ್ತಿದೆ. ಕನ್ನಡ ಸಿನಿಮಾವನ್ನು ಕೆಆರ್‌ಜಿ ಸ್ಟುಡಿಯೋಸ್‌ನವರು ವಿತರಣೆ ಮಾಡಿದರೆ, ಉತ್ತರ ಭಾರತದಲ್ಲಿ ಝೀ ಸ್ಟುಡಿಯೋಸ್‌ ಬಿಡುಗಡೆ ಮಾಡುತ್ತಿದೆ. ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಅವರ ಚೊಚ್ಚಲ ಚಿತ್ರವಾಗಿದೆ. ಈ ಚಿತ್ರದಲ್ಲಿ ಸುಶಾಂತ್ ಸಿಂಗ್, ಆಕಾಂಕ್ಷಾ ಸಿಂಗ್ ಇತರರು ನಟಿಸಿದ್ದಾರೆ.

ಆಗಸ್ಟ್‌ನಲ್ಲಿ ವರಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಕೃಷ್ಣ ಈ ಹಿಂದೆ ಘೋಷಿಸಿದ್ದರೂ ಸಹ, ಚಲನಚಿತ್ರ ನಿರ್ಮಾಪಕರು ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಸ್ಪಷ್ಟಪಡಿಸಿಲ್ಲ.