ಕಿಚ್ಚ ಸುದೀಪ್ ನಾಯಕತ್ವದ ಮುಂಬರುವ ಪೈಲ್ವಾನ್ ಚಿತ್ರವನ್ನು ವಿಶ್ವದಾದ್ಯಂತ 2500 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸುತ್ತಿದೆ. ಕೃಷ್ಣ ಅವರು ಸುದೀಪ್ ಅವರನ್ನು ನಾಯಕರನ್ನಾಗಿಸಿ ಪೈಲ್ವಾನ್ ಚಿತ್ರದ ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದಾರೆ. ಬಿಗ್ ಬಜೆಟ್ ಹಾಗೂ ರಿಚ್ ಮೇಕಿಂಗ್ ಮೂಲಕ ಈಗಾಗಲೇ ಸಾಕಷ್ಟು ಗಮನಸೆಳೆದಿರುವ ಪೈಲ್ವಾನ್ ಚಿತ್ರವು ಭಾರೀ ಹೈಪ್ ಪಡೆದಿದೆ. ಪೈಲ್ವಾನ್ ಚಿತ್ರದ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದಿದ್ದು ಪಾನ್ – ಇಂಡಿಯಾ ಬಿಡುಗಡೆಗೆ ಭಾರತದಾದ್ಯಂತದ ಕೆಲವು ದೊಡ್ಡ ವಿತರಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಬರೋಬ್ಬರಿ 8 ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದ್ದು ಇಡೀ ಇಂಡಿಯಾ ಕನ್ನಡ ಇಂಡಸ್ಟ್ರಿ ಕಡೆ ಕುತೂಹಲದಿಂದ ನೋಡುವಂತಾಗಿದೆ.

ಯಶ್ ನಾಯಕತ್ವದ ಕೆಜಿಎಫ್ ಚಿತ್ರವು 5 ಭಾಷೆಗಳಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗುವ ಮೂಲಕ ಇಡೀ ಭಾರತದ ಗಮನ ಸೆಳೆದಿತ್ತು. ಇದೀಗ, ಪೈಲ್ವಾನ್ ಚಿತ್ರವು 8 ಭಾಷೆಗಳಲ್ಲಿ ಬಿಡುಗಡೆಯಾಗುವ ಮೂಲಕ ಸ್ಯಾಂಡಲ್‌ವುಡ್ ಸಿನಿಮಾರಂಗವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಲಿದೆ. ವರದಿಯ ಪ್ರಕಾರ, ವರಮಹಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಅಂದರೆ ಆಗಸ್ಟ್ 8 ರಂದು ಪೈಲ್ವಾನ್ ಬಿಡುಗಡೆಯಾಗಲಿದೆ. ಸುದೀಪ್ ಬಾಕ್ಸರ್ ಮತ್ತು ಕುಸ್ತಿ ಪಟುವಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಆಕಾಂಕ್ಷಾ ಸಿಂಗ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರು ಕನ್ನಡಕ್ಕೆ ಈ ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಿದ್ದು, ಇತರ ತಾರಾಗಣದಲ್ಲಿ ಸುಶಾಂತ್ ಸಿಂಗ್, ಕಬೀರ್ ದುಹಾನ್ ಸಿಂಗ್ ಮತ್ತು ಶರತ್ ಲೋಹಿತಾಶ್ವಾ ಕೂಡ ಇದ್ದಾರೆ.