ಸ್ಯಾಂಡಲ್​ವುಡ್ ಪೌರಾಣಿಕ ಚಿತ್ರ ಕುರುಕ್ಷೇತ್ರ ಬಾಕ್ಸಾಫೀಸ್ ನಲ್ಲಿ ಅಬ್ಬರಿಸುತ್ತಿದೆ. ಬಿಡುಗಡೆಯಾದ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕುರುಕ್ಷೇತ್ರ ಚಿತ್ರದ ಕಲೆಕ್ಷನ್ ಎರಡನೇ ವಾರದಲ್ಲೇ 50 ಕೋಟಿ ದಾಟಿ ಹೊಸ ಇತಿಹಾಸ ನಿರ್ಮಿಸುವತ್ತ ಸಾಗುತ್ತಿದೆ. ಕುರುಕ್ಷೇತ್ರ, ರಿಲೀಸ್ ಆಗಿ ಹಾಕಿದಷ್ಟು ಬಂಡವಾಳ ಹಿಂಪಡೆಯುವಲ್ಲಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಬಾಕ್ಸಾಫೀಸ್ ‘ಸುಲ್ತಾನ್’ ಮತ್ತೊಂದು ಚಿತ್ರದ ಮೂಲಕ ದರ್ಬಾರ್ ನಡೆಸಲು ರೆಡಿಯಾಗುತ್ತಿದ್ದಾರೆ.

ಡಿ ಬಾಸ್ ಅಭಿನಯದ ‘ಒಡೆಯ’ ಚಿತ್ರ ತಂಡವೂ ರಿಲೀಸ್ ಡೇಟ್ ಫಿಕ್ಸ್ ಮಾಡಿಕೊಂಡಿದ್ದು ಮುಂದಿನ ತಿಂಗಳು ಸೆಪ್ಟೆಂಬರ್ 22 ರಂದು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಚಿತ್ರದ ಕೆಲಸಗಳು ಅಂತಿಮ ಹಂತದಲ್ಲಿದ್ದು ಕುರುಕ್ಷೇತ್ರದ ನಂತರ ಒಡೆಯ ತೆರೆಗೆ ಬರಲು ಸಿದ್ಧವಾಗಿದೆ. ಸಹಜವಾಗಿ ನಿರೀಕ್ಷೆಗಳು ಹೆಚ್ಚಾಗಿಯೇ ಇವೆ.

ಈ ರಿಮೇಕ್ ಚಿತ್ರಕ್ಕೆ ಹಿಟ್ ನಿರ್ದೇಶಕ ಎಂ.ಡಿ ಶ್ರೀಧರ್ ಆ್ಯಕ್ಷನ್ ಕಟ್ ಹೇಳಿದ್ದು, ಚಿತ್ರದಲ್ಲಿ ದರ್ಶನ್ ಸಹೋದರರಾಗಿ ನಟ ಯಶಸ್, ಪಂಕಜ್ ಅಭಿನಯಿಸಿದ್ದಾರೆ. ಹಾಗೆಯೇ ದೊಡ್ಡ ತಾರಾಬಳಗವೇ ಹೊಂದಿರುವ ಈ ಚಿತ್ರ ಫ್ಯಾಮಿಲಿ ಎಂಟರ್ಟೈನರ್ ಆಗಲಿದೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಬಾಕ್ಸಾಫೀಸ್ ನಲ್ಲಿ ‘ಕುರುಕ್ಷೇತ್ರ’ ಕದನ ನಿಲ್ಲುತ್ತಿದ್ದಂತೆ, ‘ಒಡೆಯ’ನ ದರ್ಬಾರ್ ಪ್ರಾರಂಭವಾಗಲಿದೆ.