ದೇಶದಾದ್ಯಂತ ಸೆನ್ಸೇಷನ್ ಸೃಷ್ಟಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಪೌರಾಣಿಕ ಸಿನಿಮಾ ‘ಕುರುಕ್ಷೇತ್ರ’ ಐದು ಭಾಷೆಗಳಲ್ಲಿ ಬರುತ್ತೆ ಎನ್ನಲಾಗಿತ್ತು. ಇದುವರೆಗೂ ಕನ್ನಡದಲ್ಲಿ ಬಿಟ್ಟರೇ ಬೇರೆ ಭಾಷೆಯಲ್ಲೂ ಸಿನಿಮಾ ಪ್ರಚಾರ ಆಗಿಲ್ಲ. ಆದ್ರೆ ಚಿತ್ರತಂಡ ಮಾತ್ರ ಯಾವುದೆ ರೀತಿ ತಲೆಕೆಡಿಸಿ ಕೊಂಡಹಾಗೆ ಕಾಣಿಸುತ್ತಿಲ್ಲ. ಚಿತ್ರದಿಂದ ದರ್ಶನ್ ಒಬ್ಬರನ್ನು ಬಿಟ್ಟರೆ ಬೇರೆ ಯಾವ ನಟರು ಸಹ ಕುರುಕ್ಷೇತ್ರದ ಬಗ್ಗೆ ಮಾತನಾಡಿರುವುದನ್ನು ಯಾರು ನೋಡಿದ ಹಾಗೆ ಇಲ್ಲ. ಹೀಗಾಗಿ, ಬಹುಭಾಷೆಯಲ್ಲಿ ಈ ಸಿನಿಮಾ ಬರುತ್ತಾ ಇಲ್ವಾ ಎಂಬುದು ಅನುಮಾನ ಉಂಟು ಮಾಡಿತ್ತು. ಆದ್ರೀಗ, ಸೈಲೆಂಟ್ ಆಗಿ ಯಾವುದೇ ಸದ್ದು ಸುದ್ದಿಯಿಲ್ಲದೇ ಆಂಧ್ರದಲ್ಲಿ ಕುರುಕ್ಷೇತ್ರಂ ಚಿತ್ರದ ಆಡಿಯೋ ರಿಲೀಸ್ ಮಾಡಿದ್ದಾರೆ.

ಇದೇ ಮೊದಲ ಸಲ ದರ್ಶನ್ ಸಿನಿಮಾ ಏಕಕಾಲದಲ್ಲಿ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ರಿಲೀಸ್ ಆಗ್ತಿದೆ. ಮುಂದೆ ತಮಿಳು ಮತ್ತು ಹಿಂದಿ ಕಡೆ ದರ್ಶನ್ ಹೆಜ್ಜೆ ಹಾಕಬಹುದು. ತಮಿಳು ಮತ್ತು ಹಿಂದಿಯಲ್ಲೂ ಕುರುಕ್ಷೇತ್ರ ಟ್ರೈಲರ್ ರಿಲೀಸ್ ಮಾಡುವ ಮೂಲಕ ಇದು ಪ್ಯಾನ್ ಇಂಡಿಯಾ ಸಿನಿಮಾ ಎಂದು ತೋರಿಸಬಹುದು. ಇಷ್ಟು ದಿನ ಸ್ಯಾಂಡಲ್ ವುಡ್ ನಲ್ಲಿ ಬಾಸ್ ಆಗಿದ್ದ ದರ್ಶನ್ ನೆರೆ ರಾಜ್ಯಗಳಲ್ಲೂ ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಳ್ಳಬಹುದಾದ ಅವಕಾಶ ಇದೆ. ಆದರೆ, ಈ ಬಗ್ಗೆ ಹೆಚ್ಚು ಪ್ರಚಾರ ಇಲ್ಲದೇ ಸೈಲೆಂಟ್ ಆಗಿ ಪ್ರಮೋಟ್ ಮಾಡ್ತಿದ್ದಾರೆ. ಈ ಚಿತ್ರವನ್ನು ಜಗತ್ತಿನಾದ್ಯಂತ 2D ಹಾಗೂ 3Dಯಲ್ಲಿ ಗ್ರ್ಯಾಂಡ್ ರಿಲೀಸ್ ಮಾಡುವುದು ಬಹುತೇಕ ಖಚಿತವಾಗಿದೆ. ನಾಗಣ್ಣ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಇದೊಂದು ಬಹುತಾರಗಣದ ಪೌರಾಣಿಕ ಚಿತ್ರವಾಗಿದ್ದು, ದರ್ಶನ್, ಅಂಬರೀಶ್, ರವಿಚಂದ್ರನ್, ಭಾರತಿ ವಿಷ್ಣುವರ್ಧನ್, ಅರ್ಜುನ್ ಸರ್ಜಾ, ರವಿಶಂಕರ್, ನಿಖಿಲ್ ಕುಮಾರ್, ಸ್ನೇಹ ಸೇರಿದಂತೆ ಅನೇಕ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.