ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಕನ್ನಡ ಮತ್ತು ತೆಲುಗಿನಲ್ಲಿ ‘ಕುರುಕ್ಷೇತ್ರ’ ಸಿನಿಮಾ ತೆರೆಗೆ ಬಂದಿತ್ತು. ಇದು ಒಂದು ಮಹಾಕಾವ್ಯ ಐತಿಹಾಸಿಕ ಯುದ್ಧ ಚಿತ್ರವಾಗಿದೆ. ಈ ಚಿತ್ರವನ್ನು ನಾಗಣ್ಣ ನಿರ್ದೇಶಿಸಿದ್ದು, ಕೆ.ಸಿ.ಎನ್ ಮೂವೀಸ್, ವೃಷಭಾದ್ರಿ ಪ್ರೊಡಕ್ಷನ್ಸ್, ರಾಕ್‌ಲೈನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಮುನಿರತ್ನ ನಿರ್ಮಿಸಿದ್ದಾರೆ. ಕುರುಕ್ಷೇತ್ರದಲ್ಲಿ ದರ್ಶನ್, ಅಂಬರೀಶ್, ವಿ.ರವಿಚಂದ್ರನ್, ಪಿ.ರವಿಶಂಕರ್, ಅರ್ಜುನ್ ಸರ್ಜಾ, ಮೇಘನಾ ರಾಜ್, ಸ್ನೇಹ, ಸೋನು ಸೂದ್, ಡ್ಯಾನಿಶ್ ಅಖ್ತರ್ ಸೈಫಿ, ನಿಖಿಲ್ ಕುಮಾರ್, ಹರಿಪ್ರಿಯಾ, ಶಶಿಕುಮಾರ್, ಶ್ರೀನಿವಾಸ ಮೂರ್ತಿ, ಮತ್ತು ಶ್ರೀನಾಥ್ ಪ್ರಮುಖ ಪಾತ್ರದಲ್ಲಿದ್ದಾರೆ.

ಕನ್ನಡದ ಬಿಗ್ ಬಜೆಟ್ ಸಿನಿಮಾ ‘ಕುರುಕ್ಷೇತ್ರ’ದ ಬಾಕ್ಸಾಫೀಸ್ ಬೇಟೆ ಮುಂದುವರೆದಿದೆ. ತೆರೆಕಂಡ ಎಲ್ಲಾ ಚಿತ್ರಮಂದಿರಗಳಲ್ಲೂ ದುರ್ಯೋಧನನ ಘರ್ಜನೆ ಜೋರಾಗಿಯೇ ಕೇಳಿ ಬರುತ್ತಿದೆ. ಈ ಸಿನಿಮಾ ಒಂದು ವಾರಕ್ಕೆ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ., ಪರಿಣಾಮ ಕನ್ನಡದ ಈ ಐತಿಹಾಸಿಕ ಸಿನಿಮಾ ಮೊದಲ ದಿನವೇ 13 ಕೋಟಿ ಕಲೆಕ್ಷನ್ ಮಾಡಿದೆ. ಇನ್ನು 2ನೇ ದಿನದ ಗಳಿಕೆಯು 10 ಕೋಟಿ ದಾಟಿದ್ದು, 3ನೇ ದಿನ 6 ಕೋಟಿ ಲೂಟಿ ಮಾಡಿದೆ. ನಾಲ್ಕನೇ ದಿನ 5.30 ಕೋಟಿ, 5ನೇ ದಿನ 3.45 ಕೋಟಿ ಹರಿದು ಬಂದಿದೆ. ಹಾಗೆಯೇ ವಿಕೆಂಡ್ನಲ್ಲಿ ಒಟ್ಟು 7 ಕೋಟಿ ಕಲೆಕ್ಷನ್ ಆಗಿದೆ ಎಂದು ವರದಿ ತಿಳಿಸಿದೆ. ಇನ್ನು ತಮಿಳು ಹಾಗೂ ತೆಲುಗಿನಲ್ಲಿ 3 ಕೋಟಿಗಿಂತಲೂ ಅಧಿಕ ಕಲೆಕ್ಷನ್ ಮಾಡಿದೆ.

ಆ.23 ರಂದು ಮಲಯಾಳಂನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ ನಿರ್ಮಾಪಕರು. ಇನ್ನು ಉತ್ತರ ಭಾರತದಲ್ಲಿ ಹಿಂದಿ ವರ್ಷನ್ ಬಿಡುಗಡೆಯಾಗಬೇಕಿದೆ. ಇದರಿಂದ ಕಲೆಕ್ಷನ್ನಲ್ಲಿ ಮತ್ತಷ್ಟು ಏರಿಕೆಯಾಗಲಿದೆ ಎನ್ನಲಾಗಿದೆ. ಚಿತ್ರದ ಕನ್ನಡ ಸ್ಯಾಟ್‍ಲೈಟ್ ಹಕ್ಕು 9.5 ಕೋಟಿಗೆ ಕುದುರಿದರೆ, ಆಡಿಯೋ ಹಕ್ಕು 1.5 ಕೋಟಿಗೆ ಮಾರಾಟವಾಗಿದೆ. ಹಾಗೆಯೇ ಹಿಂದಿ, ಮಲಯಾಳಂ, ತೆಲುಗು ಹಾಗೂ ತಮಿಳು ಸ್ಯಾಟಲೈಟ್ ರೈಟ್ಸ್ ಡಿಮ್ಯಾಂಡ್ ಬರಲಾರಂಭಿಸಿದೆ. ಇನ್ನು ಡಿಜಿಟಲ್ ರೈಟ್ಸ್ ಕೂಡ ಕೋಟಿ ಲೆಕ್ಕದಲ್ಲಿ ಮಾರಾಟವಾಗುವ ನಿರೀಕ್ಷೆಯಿದೆ. ‘ಕುರುಕ್ಷೇತ್ರ’ವು ಕರ್ನಾಟಕದಲ್ಲಿ ಮೊದಲ ವಾರದಲ್ಲೇ 41.5 ಕೋಟಿ ಕಲೆಕ್ಷನ್ ಮಾಡಿದೆ. ಇನ್ನು ತಮಿಳು ಹಾಗೂ ತೆಲುಗಿನ ಕಲೆಕ್ಷನ್ ಸೇರಿಸಿದರೆ ಚಿತ್ರದ ಗಳಿಕೆಯು 44 ಕೋಟಿಯನ್ನು ಮೀರಿದೆ. ಕಳೆದ 9 ದಿನಗಳಲ್ಲಿ ದರ್ಶನ್ ಅವರ 50ನೇ ಸಿನಿಮಾದ ಒಟ್ಟಾರೆ ಗಳಿಕೆಯು 50 ಕೋಟಿ ದಾಟಿದೆ. ಈ ಹಿಂದೆ ‘ಕೆಜಿಎಫ್’ ಚಿತ್ರ ಎರಡು ವಾರಗಳಲ್ಲಿ ನಿರ್ಮಿಸಿದ್ದ 43.90 ಕೋಟಿ ದಾಖಲೆಯನ್ನು ಒಂದೇ ವಾರದಲ್ಲಿ ಬಹುತಾರಾಗಣದ ಈ ಐತಿಹಾಸಿಕ ಸಿನಿಮಾ ಧೂಳೀಪಟಗೈದಿದೆ ಎಂದು ಹೇಳಲಾಗಿದೆ.

ಇನ್ನು ಸೆಪ್ಟೆಂಬರ್ನಲ್ಲಿ ಮೊದಲ ವಾರದಲ್ಲಿ ಹಿಂದಿ ವರ್ಷನ್ನನ್ನು ಬಿಡುಗಡೆ ಮಾಡಲು ವಿತರಕರು ತಿಳಿಸಿದ್ದಾರೆ. ಇದಲ್ಲದೆ, ಎಲ್ಲಾ ಆವೃತ್ತಿಗಳಿಂದ 3,000 ಚಿತ್ರಮಂದಿರಗಳಲ್ಲಿ ಕುರುಕ್ಷೇತ್ರವನ್ನು ಬಿಡುಗಡೆ ಮಾಡುವ ಯೋಜನೆ ಇದೆ. ಈ ಸಿನಿಮಾ ನೂರು ಕೋಟಿ ಕ್ಲಬ್ ಸೇರಬೇಕು ಎನ್ನುವ ಆಸೆ ಅನೇಕರದ್ದಾಗಿದೆ. ಅಂದುಕೊಂಡಂತೆ ಇದೆಲ್ಲವೂ ನಡೆದರೆ ‘ಕುರುಕ್ಷೇತ್ರ’ ಸಿನಿಮಾ ಅತೀ ವೇಗದಲ್ಲಿ ನೂರು ಕೋಟಿ ಕ್ಲಬ್ ಸೇರುವುದು ಪಕ್ಕಾ ಎನ್ನಲಾಗುತ್ತಿದೆ.