ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಅಧ್ಯಾಯ 1 ಇವತ್ತಿಗೂ ಸಂಚಲನ ಸೃಷ್ಟಿಸುತ್ತಿರುವುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಈಗಾಗಲೇ ಕೆಜಿಎಫ್ ಅಧ್ಯಾಯ 2ರ ಚಿತ್ರೀಕರಣ ಆರಂಭವಾಗಿ ಮೊದಲ ಶೆಡ್ಯೂಲ್‌ ಕಂಪ್ಲೀಟ್‌ ಆಗಿದೆ. ಇದೀಗ ಈ ಚಿತ್ರದ ಎರಡನೇ ಶೆಡ್ಯೂಲ್‌ ಪ್ರಾರಂಭವಾಗಿದ್ದು, ಬೆಂಗಳೂರಿನ ಮಿನರ್ವ ಮಿಲ್‌ ಬಳಿ ಬೃಹತ್‌ ಸೆಟ್‌ ಹಾಕಿ ಶೂಟಿಂಗ್ ನಡೆಸಲಾಗುತ್ತಿದೆ. ಕೆಜಿಎಫ್‌ ಸಿನಿಮಾದ ‘ನರಾಚಿ’ ಎಂಬ ಸ್ಥಳವನ್ನು ಮಿನರ್ವ ಮಿಲ್‌ನಲ್ಲಿ ಕಲಾ ನಿರ್ದೇಶಕ ಶಿವಕುಮಾರ್‌ ಸೃಷ್ಟಿ ಮಾಡಿದ್ದಾರೆ. ಉಳಿದ ಭಾಗವನ್ನು ಬೆಂಗಳೂರು, ಮೈಸೂರು, ಕೆಜಿಎಫ್‌ನಲ್ಲಿ ಶೂಟ್‌ ಮಾಡಲಾಗುವುದು ಎಂದು ಕೆಜಿಎಫ್ ಚಿತ್ರತಂಡ ತಿಳಿಸಿದೆ. ಕೆಜಿಎಫ್ ಸಿನಿಮಾದಲ್ಲಿ ಕೆಲಸ ಮಾಡಿದ ತಂತ್ರಜ್ಞರೇ ‘ಕೆಜಿಎಫ್ ಚಾಪ್ಟರ್ 2’ ಚಿತ್ರಕ್ಕಾಗಿ ಸಹ ಕೆಲಸ ಮಾಡುತ್ತಿದ್ದಾರೆ.

ಮೊದಲ ಭಾಗಕ್ಕೆ ಕೆಲಸ ಮಾಡಿದ ಎಲ್ಲಾ ಕಲಾವಿದರ ಜತೆಗೆ ಇನ್ನೂ ಹೆಚ್ಚಿನ ಕಲಾವಿದರು ಈ ಭಾಗದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಚಿತ್ರಕ್ಕಾಗಿ ಹಾಕಿರುವ ಬೃಹತ್ ಸೆಟ್ ಕೂಡ ಭಾರೀ ಗಮನಸೆಳೆಯುತ್ತಿದ್ದು, ಸೂಪರ್ ಹಿಟ್ ‘ಕೆಜಿಎಫ್’ ಚಿತ್ರಕ್ಕಿಂತಲೂ ಮುಂಬರುವ ‘ಕೆಜಿಎಫ್ ಚಾಪ್ಟರ್ 2’ ಹೆಚ್ಚಿನ ಸೌಂಡ್ ಮಾಡುತ್ತಿದೆ. ಒಟ್ಟಿನಲ್ಲಿ ಚಿತ್ರೀಕರಣದ ಹಂತದಲ್ಲಿಯೇ ‘ಕೆಜಿಎಫ್‌ ಚಾಪ್ಟರ್ 2’ ಭಾರಿ ಸೆನ್ಸೇಶನ್‌ ಕ್ರಿಯೇಟ್‌ ಮಾಡುತ್ತಿರುವುದು ಸಿನಿ ರಸಿಕರಲ್ಲಿ ಕುತೂಹಲ ಇಮ್ಮಡಿಗೊಳಿಸಿದೆ.