ಪ್ರಶಾಂತ್ ನೀಲ್ ನಿರ್ದೇಶನದ ಕನ್ನಡದ ಹೆಮ್ಮೆಯ ಚಿತ್ರ ಕೆಜಿಎಫ್: ಅಧ್ಯಾಯ 1 ವಿಶ್ವಾದ್ಯಂತ 200 ಕೋಟಿ ರೂ.ಗಳ ಕ್ಲಬ್‌ಗೆ ಪ್ರವೇಶಿಸಿ ಕನ್ನಡ ಚಿತ್ರರಂಗದತ್ತ ಎಲ್ಲರೂ ಒಮ್ಮೆ ತಿರುಗಿ ನೋಡುವಂತೆ ಮಾಡಿದೆ. ಈಗ, ಕೇವಲ ಸ್ಯಾಂಡಲ್ವುಡ್ ಮಾತ್ರವಲ್ಲ ಇಡೀ ದೇಶವೇ ಎದುರು ನೋಡುತ್ತಿರುವ ಸಿನಿಮಾ ‘ಕೆ.ಜಿ.ಎಫ್ ಚಾಪ್ಟರ್ 2’. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಚಾಪ್ಟರ್ 1 ಈಗಾಗಲೇ ಜಯಭೇರಿ ಬಾರಿಸಿದ್ದು, ಇದರ ಮುಂದುವರಿದ ಭಾಗಕ್ಕಾಗಿ ಎಲ್ಲರೂ ಕಾತರರಾಗಿದ್ದಾರೆ.

‘ಕೆ.ಜಿ.ಎಫ್ ಚಾಪ್ಟರ್ 2’ ಎಂದ ಕೂಡಲೇ ನೆನಪಾಗೋದು ಈ ಸಿನಿಮಾ ಯಾವಾಗ ತೆರೆ ಕಾಣಲಿದೆ ಅನ್ನೋದು. ಈ ಹಿಂದೆ ‘ಚಾಪ್ಟರ್ 2’ 2020ರ ಡಿಸೆಂಬರ್ನಲ್ಲಿ ತೆರೆ ಕಾಣಲಿದೆ ಎಂದು ಪ್ರಕಟಿಸಲಾಗಿತ್ತು. ಆದರೆ ಈಗ ಈ ದಿನಾಂಕ ಇನ್ನೂ ಹಿಂದಕ್ಕೆ ಬಂದಿದೆ. ಅಂದರೆ ಡಿಸೆಂಬರ್ಗೂ ಮೊದಲೇ ಸಿನಿಮಾ ತೆರೆ ಕಾಣಲಿದೆಯಂತೆ. ಅಂದರೆ 2020ರ ಏಪ್ರಿಲ್ಗೆ ಚಿತತ್ರ ರಿಲೀಸ್ ಆಗಲಿದೆ. ಚಿತ್ರ ನಿರ್ಮಾಪಕರು ಜನವರಿ 2020 ರ ವೇಳೆಗೆ ಶೂಟಿಂಗ್ ಪೂರ್ಣಗೊಳಿಸಿ ಬೇಸಿಗೆಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಗುರಿ ಹೊಂದಿದ್ದಾರೆ. ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದ್ದು, ಅಂದುಕೊಂಡ ಸಮಯಕ್ಕಿಂತ ಮುಂಚಿತವಾಗಿಯೇ ಶೂಟಿಂಗ್ ಕೊನೆಗೊಳ್ಳಲಿದೆಯಂತೆ. ಇದರಿಂದಾಗಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸಾಕಷ್ಟು ಸಮಯ ಸಿಗಲಿದ್ದು, ಬೇಗನೆ ಚಿತ್ರವನ್ನು ತೆರೆಗೆ ತರಬಹುದು ಎಂದು ಚಿತ್ರತಂಡದ ಮೂಲಗಳಿಂದ ತಿಳಿದು ಬಂದಿದೆ. ಎಂಟು ತಿಂಗಳು ಮೊದಲೇ ಈ ರಾಕಿ ಭಾಯ್ ಅವರನ್ನು ಕಣ್ತುಂಬಿಕೊಳ್ಳಬಹುದು ಎಂದು ಅಭಿಮಾನಿಗಳು ಹಿಗ್ಗುತ್ತಿದ್ದಾರೆ. ಆದಷ್ಟು ಬೇಗ ಶೂಟಿಂಗ್ಗೆ ತೆರೆ ಬೀಳಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.