ಸ್ಯಾಂಡಲ್ ವುಡ್ ನಟಿ ಹಾಗೂ ರಾಜಕಾರಣಿ ರಮ್ಯಾಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಪೋರ್ಚುಗಲ್‌ ದೇಶದ ತಮ್ಮ ಬಹುಕಾಲದ ಗೆಳೆಯ ರಾಫೆಲ್‌ ಜೊತೆಗೆ ಹಸೆಮಣೆ ಏರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ರಮ್ಯಾ ಮತ್ತು ಶ್ರೀನಗರ ಕಿಟ್ಟಿ ಮುಖ್ಯಭೂಮಿಕೆಯಲ್ಲಿದ್ದ ‘ಸಂಜು ವೆಡ್ಸ್ ಗೀತಾ’ ಸಿನಿಮಾದ ಸಂಭ್ರಮಾಚರಣೆಯಲ್ಲಿ ರಮ್ಯಾ ಹಾಗೂ ರಾಫೆಲ್ ಒಟ್ಟಾಗಿ ಕಾಣಿಸಿಕೊಂಡಿದ್ದರು. ಬಳಿಕ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ ವೇಳೆಯೂ ಜೊತೆಯಾಗಿ ಕಾಣಿಸಿಕೊಂಡಿದ್ದರಿಂದ ಇಬ್ಬರೂ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಏಳೆಂಟು ವರ್ಷಗಳಿಂದ ರಿಲೇಷನ್‍ಶಿಪ್‍ನಲ್ಲಿರುವ ಪೋರ್ಚುಗಲ್ ದೇಶದ ರಾಫೆಲ್ ಅವರು ರಮ್ಯಾ ಅವರನ್ನು ಸದ್ಯದಲ್ಲೇ ಮದುವೆಯಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಮೋಹಕ ತಾರೆ ಕನ್ನಡ ಚಿತ್ರರಂಗ ಪ್ರವೇಶಿಸಿದ್ದು ನಟ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಅಭಿ’ ಚಿತ್ರದ ಮೂಲಕ. ಕನ್ನಡ ಸೇರಿದಂತೆ ತೆಲುಗು ಮತ್ತು ತಮಿಳು ಚಿತ್ರದಲ್ಲಿಯೂ ಅವರು ನಟಿಸಿದ್ದಾರೆ. ಸಾಲುಸಾಲು ಹಿಟ್ ಚಿತ್ರಗಳನ್ನು ನೀಡುವ ಮೂಲಕ ಕನ್ನಡದ ಎಲ್ಲ ಸೂಪರ್ ಸ್ಟಾರ್ ಗಳ ಜೊತೆಯೂ ತೆರೆ ಹಂಚಿಕೊಂಡಿದ್ದಾರೆ. 2016ರಲ್ಲಿ ತೆರೆಕಂಡ ಕನ್ನಡದ ‘ನಾಗರಹಾವು’ ಅವರು ನಟಿಸಿದ ಕೊನೆಯ ಸಿನಿಮಾ. ಸುಮಾರು 10 ವರ್ಷಗಳ ಕಾಲ ಸ್ಯಾಂಡಲ್‍ವುಡ್‍ನಲ್ಲಿ ಮಿಂಚಿದ್ದ ನಟಿ ರಮ್ಯಾ 2013ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ಸಂಸದೆಯೂ ಆಗಿದ್ದರು. ಬಳಿಕ ಕಾಂಗ್ರೆಸ್‌ ಪಕ್ಷದಲ್ಲಿ ಅವರು ಸೋಷಿಯಲ್‌ ಮೀಡಿಯಾದ ಉಸ್ತುವಾರಿ ಹೊತ್ತಿದ್ದರು. ರಮ್ಯ ಇತ್ತೀಚಿನ ದಿನಗಳಲ್ಲಿ ಸಕ್ರಿಯ ರಾಜಕಾರಣದಿಂದಲೂ ಅಂತರ ಕಾಯ್ದುಕೊಂಡಿದ್ದರು.

ಇದೀಗ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಮದುವೆಯ ಸಿದ್ಧತೆಗಳು ನಡೆದಿದ್ದು, ದುಬೈನಲ್ಲಿ ರಾಫೆಲ್ ಅವರನ್ನು ಕೈ ಹಿಡಿಯಲು ರಮ್ಯಾ ತಯಾರಾಗಿದ್ದಾರೆ.