ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹದಿಂದ ಅಲ್ಲಿನ ಜನರ ಜೀವನ ಅಸ್ತವ್ಯಸ್ತವಾಗಿದೆ. ಕೆಲವರು ಮೃತಪಟ್ಟಿದ್ದಾರೆ. ಜಾನುವಾರುಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಸಾವಿರಾರು ಜನರು ಮನೆ ಮಠ ಎಲ್ಲವನ್ನು ಕಳೆದುಕೊಂಡು ಗಂಜಿಕೇಂದ್ರಗಳಲ್ಲಿ ನೆಲೆಸುವಂತಾಗಿದೆ. ಇದರಿಂದ ಅಲ್ಲಿನ ಜನರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು, ಒದ್ದಾಡುವಂತಾಗಿದೆ. ಹಾಗಾಗಿ ಅವರಿಗೆ ಸಹಾಯ ಮಾಡಲು ಸ್ಯಾಂಡಲ್ ವುಡ್ ಕಲಾವಿದರೆಲ್ಲ ಕೈ ಜೋಡಿಸಿದ್ದಾರೆ. ಅದರಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಯಶೋಮಾರ್ಗವನ್ನು ಅನುಸರಿಸಿ ಅಂಧ ಮಕ್ಕಳಿಗೆ ಆಸರೆ ನೀಡುತ್ತಿದ್ದಾರೆ.

ಹೌದು, ಕಣ್ಣು ಕಾಣದ ಮಕ್ಕಳಿಗೆ ಆಗುತ್ತಿರುವ ಮಳೆಯ ಪರಿಣಾಮ ತಿಳಿಯುವುದಿಲ್ಲ. ಹಾಗಾಗಿ ಅಂತಹ ಮಕ್ಕಳನ್ನು ರಕ್ಷಿಸುವ ಸಲುವಾಗಿ, ಯಶ್ ತಮ್ಮ ಯಶೋ ಮಾರ್ಗವನ್ನು ಅನುಸರಿಸಿದ್ದಾರೆ. ಪ್ರವಾಹದಲ್ಲಿ ಸಿಲುಕಿರುವ 70 ಅಂಧ ವಿದ್ಯಾರ್ಥಿಗಳಿಗೆ ರಾಕಿಂಗ್ ಸ್ಟಾರ್ ಯಶ್ ಅವರ ಯಶೋಮಾರ್ಗ ನೆರವಿಗೆ ಬಂದಿದೆ. ಪ್ರವಾಹದಿಂದ ಈ ಅಂಧ ಮಕ್ಕಳು ಸಹ ತಮ್ಮ ವಸತಿ ಶಾಲೆಯನ್ನು ಕಳೆದುಕೊಂಡು ಬೀದಿಗೆ ಬೀಳುವಂಥ ಪರಿಸ್ಥಿತಿ ಎದುರಾಗಿತ್ತು. ಆದ್ರೆ ಆ ಮಕ್ಕಳಿಗೆ ಯಶ್ ನೆರವಾಗಿದ್ದಾರೆ. ಗದಗ ಜಿಲ್ಲೆ ಹೊಲೆಆಲೂರನ ಜ್ಞಾನಸಿಂಧು ಅಂಧ ಮಕ್ಕಳ ವಸತಿ ಶಾಲೆ ಪ್ರವಾಹದಿಂದ ಜಲಾವೃತವಾಗಿದ್ದು, ಅಲ್ಲಿನ ಅಂಧ ವಿದ್ಯಾರ್ಥಿಗಳಿಗೆ ಧಾರವಾಡದ ಚೈತನ್ಯ ಕಲಾ ಮಂಟಪದಲ್ಲಿ ಆಶ್ರಯ ನೀಡಲಾಗಿದೆ. ಈಗ ಈ ಮಕ್ಕಳಿಗೆ ಯಶೋಮಾರ್ಗದ ಸದಸ್ಯರು 70 ಜಾಕೆಟ್ ನೀಡಿದ್ದಾರೆ. ಜೊತೆಗೆ ಮಕ್ಕಳಿಗೆ ಊಟ, ತಿಂಡಿ ವ್ಯವಸ್ಥೆ ಮಾಡಲಾಗಿದ್ದು, ಎಲ್ಲ ಮಕ್ಕಳನ್ನು ಪ್ರವಾಹದಿಂದ ರಕ್ಷಿಸಿದ್ದಾರೆ. ಇನ್ನು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅತಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿ ಮೂಲಭೂತ ವಸ್ತುಗಳ ಅಗತ್ಯತೆ ಹೆಚ್ಚಿದ್ದು, ರಾಕಿಂಗ್ ಸ್ಟಾರ್ ಯಶ್ ಅವರು “ಯಶೋಮಾರ್ಗ” ತಂಡದ ಮೂಲಕ ದಿನಬಳಕೆ ವಸ್ತುಗಳನ್ನು ಕಳುಹಿಸಿದ್ದಾರೆ. ಲಾರಿಯಲ್ಲಿ ಆಹಾರ ಹಾಗೂ ಇತರೆ ಅಗತ್ಯ ವಸ್ತುಗಳನ್ನು ಬ್ಯಾಕ್ಸ್ ಗಳಲ್ಲಿ ಪ್ಯಾಕ್ ಮಾಡಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಈಗಾಗಲೇ ತಂಡ ಕಳುಹಿಸಿದೆ. ಈ ಮೂಲಕ ಯಶ್ ಪ್ರವಾಹ ಪೀಡಿತ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ.