ಜೀ-ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಅನೇಕ ಗಾಯಕರನ್ನ ಕರುನಾಡಿಗೆ ಪರಿಚಯಿಸಿದೆ. ಸರಿಗಮಪ 15ನೇ ಆವೃತ್ತಿಯಲ್ಲಿ ಬೆಳಕಿಗೆ ಬಂದ ಪ್ರತಿಭೆ ಹನುಮಂತ. ಸರಿಗಮಪ ಸೀಸನ್ 15ರಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ಹನುಮಂತ, ತದನಂತರ ಸಿಕ್ಕಾಪಟ್ಟೆ ಸದ್ದು ಮಾಡಿದ. ಹೀಗೆ ಸರಿಗಮಪ ವೇದಿಕೆಯಲ್ಲಿ ಅಬ್ಬರಿಸಿ ಬೊಬ್ಬರಿದಿದ್ದ ಹನುಮಂತ ಶೋ ಮುಗಿದ ಮೇಲೆ ಸೂಪರ್ ಸ್ಟಾರ್ ಆಗಿರೋ ವಿಷಯ ನಿಮಗೆ ಗೊತ್ತಿದೆ. ಇದೀಗ, ಈ ಹನುಮಂತ ಮತ್ತೆ ನಿಮ್ಮ ಮುಂದೆ ಬರ್ತಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನೂತನ ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿ ಹನುಮಂತ ಸ್ಪರ್ಧಿಯಾಗಿ ಕಣಕ್ಕೆ ಇಳಿಯುತ್ತಿದ್ದಾರೆ.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಎರಡನೇ ಆವೃತ್ತಿ ಆರಂಭವಾಗುತ್ತಿದೆ. ಈ ಶೋನಲ್ಲಿ ಸರಿಗಮಪ ಖ್ಯಾತಿಯ ಹನುಮಂತ ಕೂಡ ಸ್ಪರ್ಧಿಯಾಗಿದ್ದಾರೆ. ಸರಿಗಮಪ ಕಾರ್ಯಕ್ರಮದಲ್ಲಿ ಗಾಯಕರಾಗಿದ್ದ ಹನುಮಂತ ಈಗ ಜೀ ಕನ್ನಡದ ಅತ್ಯಂತ ಜನಪ್ರಿಯ ‘ಡಾನ್ಸ್ ಕರ್ನಾಟಕ ಡಾನ್ಸ್’ ಫ್ಯಾಮಿಲಿ ವಾರ್, ಹೊಸ ಸೀಸನ್ನಿನಲ್ಲಿ ಡ್ಯಾನ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸರಿಗಮಪ 15ನೇ ಆವೃತ್ತಿಯಲ್ಲಿ ಹನುಮಂತನ ಸಹಸ್ಪರ್ಧಿಯಾಗಿದ್ದ ಶೈನಿ, ಈಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಹನುಮಂತನಿಗೆ ಜೋಡಿಯಾಗಿದ್ದಾರೆ. ಎಂದಿನಂತೆ ಕ್ರೇಜಿ ಕ್ವೀನ್ ರಕ್ಷಿತಾ, ಚಿನ್ನಾರಿ ಮುತ್ತಾ ವಿಜಯ್ ರಾಘವೇಂದ್ರ ಮತ್ತು ಸಂಗೀತ ಸಂಯೋಜಕ ಅರ್ಜುನ್ ಜನ್ಯಾ ಅವರು ಕಾರ್ಯಕ್ರಮದ ತೀರ್ಪುಗಾರರಾಗಿದ್ದು, ಜನಪ್ರಿಯ ನಿರೂಪಕಿ ಅನುಶ್ರೀ ಈ ಷೋ ನ ಮತ್ತೊಂದು ವಿಶೇಷ. ಈ ಹೊಸ ಸೀಸನ್ನಿನಲ್ಲಿ ಜೀ ಕನ್ನಡ ಕುಟುಂಬದ ಪ್ರಮುಖ ತಾರೆಗಳು ಪಾಲ್ಗೊಂಡು ವೀಕ್ಷಕರನ್ನು ಮನರಂಜಿಸುವುದು ಈ ಶೋ ನ ಪ್ರಮುಖ ಧ್ಯೇಯ.

ಕಮಲಿ, ಗಟ್ಟಿಮೇಳ, ಬ್ರಹ್ಮಗಂಟು, ಜೋಡಿ ಹಕ್ಕಿ, ರಾಧಾ ಕಲ್ಯಾಣ, ಮಹಾದೇವಿ, ಪಾರು, ಜೋಡಿ ಹಕ್ಕಿ, ಉಘೆ ಉಘೆ ಮಹಾದೇಶ್ವರ, ಸರೆಗಮಪ, ಡ್ರಾಮಾ ಜೂನಿಯರ್ಸ್ ಸೀಸನ್-2 ಮತ್ತು ಕಾಮಿಡಿ ಕಿಲಾಡಿಗಳು ಸೀಸನ್-3 ಸೇರಿದಂತೆ, ಹಲವಾರು ರಿಯಾಲಿಟಿ ಶೋ ಮತ್ತು ಧಾರಾವಾಹಿಗಳಿಂದ ಹೊಸ ಪ್ರತಿಭಾವಂತರು ಫ್ಯಾಮಿಲಿ ವಾರ್ ಸೀಸನ್-2ರಲ್ಲಿ ಭಾಗವಹಿಸಲಿದ್ದಾರೆ.