ಬೆಂಗಳೂರಿನ ರಸ್ತೆಯಲ್ಲಿ ಸಂಚರಿಸುವುದೆಂದರೆ ಯಮಲೋಕಕ್ಕೆ ಪ್ರಯಾಣ ಬೆಳೆಸಿದಂತೆ. ಬೆಂಗಳೂರು ಮಂದಿ ಬಹುತೇಕ ತಮ್ಮ ಜೀವನವನ್ನು ಟ್ರಾಫಿಕ್ ಜಂಜಾಟದಿಂದ, ಕಿತ್ತು ಹೋಗಿರುವ ರಸ್ತೆಯಲ್ಲಿಯೇ ಕಳೆಯುತ್ತಾರೆ. ಸಾಮಾನ್ಯ ಜನರು ಮಾತ್ರವಲ್ಲ, ದೊಡ್ಡ ಸೆಲೆಬ್ರಿಟಿಗಳು ಸಹ ಅನಾನುಕೂಲತೆಯನ್ನು ಎದುರಿಸುತ್ತಿದ್ದಾರೆ. ರಸ್ತೆ ಚೆನ್ನಾಗಿರುವಂತೆ ನೋಡಿಕೊಳ್ಳುವುದು ಬಿಬಿಎಂಪಿ, ಜನ ಪ್ರತಿನಿಧಿಗಳ ಆದ್ಯ ಕರ್ತವ್ಯ. ಆದರೆ, ಎಕ್ಕುಟ್ಟು ಹೋಗಿರೋ ರಸ್ತೆ ನೋಡಿ, ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ರಾಧಕೃಷ್ಣನ್ ಅವರು ನಗರದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುವಂತೆ ಒತ್ತಾಯಿಸಿದ್ದಾರೆ.

“ಮಳೆಯಿಂದ ರಸ್ತೆಗಳು ಹದಗೆಟ್ಟಿವೆ. ಆದರೆ ಆ ರಸ್ತೆಯಲ್ಲಿಯೇ ಜನರು ಪ್ರತಿನಿತ್ಯ ಕಷ್ಟಪಟ್ಟು ಓಡಾಡುತ್ತಿದ್ದಾರೆ. ಇಲ್ಲಿನ ಜನರ ಸಮಸ್ಯೆಗಳನ್ನು ನಾನೇ ಕಣ್ಣಾರೆ ನೋಡಿದ್ದೇನೆ. ಅಧಿಕಾರಿಗಳಿಗೆ ಅವರ ಕರ್ತವ್ಯವನ್ನು ನಾವು ನೆನಪಿಸಬೇಕಾಗಿರುವುದು ವಿಷಾದಕರವಾಗಿದೆ. ದಯವಿಟ್ಟು ಈ ಕಡೆ ತಕ್ಷಣ ಗಮನಿಸಿ,” ಎಂದು ಪ್ರಿಯಾ ಸುದೀಪ್ ಸಂಬಂಧಪಟ್ಟ ಅಧಿಕಾರಿಗಳಿಗೆ ಟ್ವೀಟ್ ಮಾಡುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.