ಕ್ಯೂಟಾಗಿ ಸ್ಮೈಲ್ ಮಾಡುತ್ತಾ ಕಿರಿಕ್ ಮಾಡಿಕೊಂಡೇ ದಕ್ಷಿಣದ ಟಾಪ್ ನಟಿಯರ ಪಟ್ಟಿ ಸೇರಿದ ರಶ್ಮಿಕಾ ಮಂದಣ್ಣ. ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ರಶ್ಮಿಕಾ ಬಾಲಿವುಡ್ನಲ್ಲಿ ಖಾತೆ ತೆರೆಯುವ ಕುರಿತು ಆಗಾಗ ಸುದ್ದಿಗಳು ಸದ್ದು ಮಾಡುತ್ತಲೇ ಇವೆ. ಆದರೆ ಈಗ ಹೆಚ್ಚುಕಡಿಮೆ ಕಿರಿಕ್ ಸಾನ್ವಿ ಬಿಟೌನ್‍ಗೆ ಎಂಟ್ರಿ ಕೊಡೋದು ಪಕ್ಕಾ ಆಗಿದೆ.

‘ಕಿರಿಕ್ ಪಾರ್ಟಿ’ ಚಿತ್ರ ಸೂಪರ್ ಡೂಪರ್ ಹಿಟ್ ಆಗಿದ್ದೇ ತಡ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣಗೆ ಅದೃಷ್ಟದ ಬಾಗಿಲು ತೆರೆದುಕೊಂಡಿತು. ಕನ್ನಡದ ಮೂರು ಚಿತ್ರಗಳು ಬ್ಯಾಕ್ ಟು ಬ್ಯಾಕ್ ಹಿಟ್ ಲೀಸ್ಟ್ನಲ್ಲಿ ಸೇರುತ್ತಿದ್ದಂತೆ ಅತ್ತ ಟಾಲಿವುಡ್ನಿಂದ ಕರುನಾಡ ಕ್ರಶ್ಗೆ ಬುಲಾವ್ ಬಂದಿತ್ತು. ಇನ್ನೇನು ಸಿಕ್ಕ ಅವಕಾಶವನ್ನು ಬಳಸಿಕೊಂಡ ಸ್ಯಾಂಡಲ್ವುಡ್ ಸಾನ್ವಿ ‘ಚಲೋ’ ಎಂದು ಹೊರಟೇ ಬಿಟ್ಟಿದ್ದರು. ಈ ಕರ್ನಾಟಕದ ಕ್ರಶ್ ಈಗ ಕನ್ನಡಕ್ಕಿಂತ ಹೆಚ್ಚಾಗಿ ಶೈನ್ ಆಗ್ತಿರೋದು ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ.

ಸದ್ಯ ರಶ್ಮಿಕಾ ಕೈಯಲ್ಲಿ ಐದು ಸಿನಿಮಾಗಳಿವೆ. ಕನ್ನಡದ ‘ಪೊಗರು’ ಚಿತ್ರದಲ್ಲಿ ಈ ಕಿರಿಕ್ ಸುಂದರಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಜೋಡಿಯಾಗಿದ್ದಾರೆ. ಟಾಲಿವುಡ್‍ನಲ್ಲಿ ಪ್ರಿನ್ಸ್ ಮಹೇಶ್ ಬಾಬು ಜತೆ ‘ಸರಿಲೇರು ನೀಕೆವ್ವರು’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೇ ‘ಭೀಷ್ಮ’ ಸಿನಿಮಾದಲ್ಲಿ ನಿತಿನ್‍ಗೆ ಜತೆಯಾಗಿದ್ದಾರೆ. ಇನ್ನು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿರುವ ಇಪ್ಪತ್ತನೇ ಚಿತ್ರಕ್ಕೆ ರಶ್ಮಿಕಾನೇ ನಾಯಕಿ ಅನ್ನೋದು ಬಹುತೇಕ ಖಚಿತವಾಗಿದೆ. ಇವುಗಳ ನಡುವೆ ಕಾಲಿವುಡ್‍ನಲ್ಲಿ ಡೆಬ್ಯೂ ಮಾಡಿರುವ ರಶ್ಮಿಕಾ, ಕಾರ್ತಿ ಜತೆ ‘ಸುಲ್ತಾನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಕೂಡ. ಇಷ್ಟೆಲ್ಲ ಬ್ಯುಸಿಯಿದ್ದರೂ ರಶ್ಮಿಕಾ ಬಾಲಿವುಡ್‍ಗೆ ಹಾರೋ ಬಗ್ಗೆ ಹಲವು ಬಾರಿ ಗಾಳಿ ಸುದ್ದಿ ಹಬ್ಬಿದ್ದವು.

ಶಾಹಿದ್ ಕಪೂರ್ ಹೀರೋ ಆಗಿ ನಟಿಸುತ್ತಿರೋ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಹೀರೋಯಿನ್ ಆಗಿ ಬಣ್ಣ ಹಚ್ಚಲಿದ್ದಾರೆ. ಆದರೆ ಈ ಸುದ್ದಿ ಇನ್ನೂ ಅಧಿಕೃತವಾಗಿಲ್ಲ. ಆದ್ರೀಗ ತೆಲುಗಿನ ‘ಸರಿಲೇರು ನೀಕೆವ್ವರು’ ಚಿತ್ರವನ್ನು ಹಿಂದಿಯಲ್ಲೂ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ತಯಾರಾಗಿದೆಯಂತೆ. ಇದು ನಿಜವಾದ್ರೆ ಮಹೇಶ್ ಬಾಬು ಮತ್ತು ರಶ್ಮಿಕಾ ಮಂದಣ್ಣ ಅಧಿಕೃತವಾಗಿ ಹಿಂದಿ ಸಿನಿ ಇಂಡಸ್ಟ್ರಿಗೆ ಪದಾರ್ಪಣೆ ಮಾಡಲಿದ್ದಾರೆ. ಈ ಮೂಲಕ ‘ಸರಿಲೇರು ನೀಕೆವ್ವರು’ ಸಿನಿಮಾ ರಶ್ಮಿಕಾ ಅವರ ಮೊದಲ ಬಾಲಿವುಡ್ ಚಿತ್ರವಾಗಲಿದೆ. ಆದ್ರೆ ಇದು ಎಷ್ಟು ಸತ್ಯ ಅನ್ನೋದನ್ನು ತಿಳಿಯೋದಕ್ಕೆ 2020ರ ಜನವರಿ ವರೆಗೆ ಕಾಯಲೇಬೇಕು.