ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಚಿತ್ರೀಕರಣ ಕೆಜಿಎಫ್‌ನಲ್ಲಿ ಭರದಿಂದ ಸಾಗುತ್ತಿತ್ತು. ಇದಕ್ಕಾಗಿ ಕೋಲಾರ ಜಿಲ್ಲೆಯ ಕೆಜಿಎಫ್‌ನ ಸೈನೇಡ್ ಗುಡ್ಡಗಳಲ್ಲಿ ಭರ್ಜರಿ ಸೆಟ್ ಹಾಕಿ ಚಿತ್ರೀಕರಿಸಲಾಗುತ್ತಿತ್ತು.

ಈ ಮಧ್ಯೆ ಕೆಜಿಎಫ್‌ನ ರಾಷ್ಟ್ರೀಯ ಪ್ರಜಾ ಚಕ್ರವ್ಯೂಹ ಪಕ್ಷದ ಅಧ್ಯಕ್ಷ ಶ್ರೀನಿವಾಸ್ ಎಂಬುವರು, ಇತ್ತೀಚೆಗೆ ಸುರಿದ ಭಾರೀ ಮಳೆಗೆ ಶೂಟಿಂಗ್ಗಾಗಿ ನಿರ್ಮಿಸಲಾಗಿದ್ದ ಸೆಟ್ ನಾಶವಾಗಿದೆ. ಇದರಿಂದಾಗಿ ಅಲ್ಲಿನ ಗಿಡ, ಮರಗಳಿಗೆ ಹಾನಿಯಾಗಿದ್ದು, ಚಿತ್ರೀಕರಣದಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಕೆಜಿಎಫ್ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರದ ಚಿತ್ರೀಕರಣಕ್ಕೆ ತಡೆಯಾಜ್ಞೆ ನೀಡಿ ನಿರ್ಮಾಪಕರಿಗೆ ನೋಟಿಸ್ ಜಾರಿ ಮಾಡಿದೆ ಕೆಜಿಎಫ್ ಜೆಎಂಎಫ್‌ಸಿ ನ್ಯಾಯಾಲಯ. ನ್ಯಾಯಾಲಯ ನೀಡಿರುವ ಆಜ್ಞೆಗೆ ಕೆಜಿಎಫ್ ಚಿತ್ರತಂಡ ಜಾಗ ಖಾಲಿ ಮಾಡಿದ್ದಾರೆ.

ಕೆಜಿಎಫ್ 2 ಸಿನಿಮಾ ಕೂಡಾ ಈಗಾಗಲೇ ಜನರ ಗಮನವನ್ನು ತನ್ನತ್ತ ಸೆಳೆದಿದ್ದು, Chapter 2 ನಲ್ಲಿ ಬಾಲಿವುಡ್ ಹಿರಿಯ ನಟ ಸಂಜಯ್ ದತ್ ಅವರು ಅಧೀರ ಪಾತ್ರದಲ್ಲಿ ಚಿತ್ರಕ್ಕೆ ಪ್ರವೇಶ ಮಾಡಿದ್ದಾರೆ. ಪಾತ್ರವರ್ಗದಲ್ಲಿ ರವೀನಾ ಟಂಡನ್ ಸಹ ಇದ್ದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯಾಗಿ ಕಾಣಸಲಿದ್ದಾರೆ ಎನ್ನುತ್ತಿವೆ ಮೂಲಗಳು. ಈಗಾಗಲೇ ಸಿನಿಮಾದ ಬಹುತೇಕ ಭಾಗದ ಚಿತ್ರೀಕರಣ ಮುಗಿದಿದೆ ಎನ್ನಲಾಗಿದೆ. ಹೊಂಬಾಳೆ ಬ್ಯಾನರ್ ನಡಿಯಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ವಿಜಯ್ ಕಿರಂದೂರ್ ನಿರ್ಮಿಸುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ, ಅಚ್ಯುತ ಕುಮಾರ್, ಅನಂತ್ ನಾಗ್, ನಾಸರ್, ಅರ್ಚನಾ ಜೋಯಿಸ್, ವಸಿಷ್ಠ ಸಿಂಹ, ಮಾಳವಿಕಾ ಅವಿನಾಶ್ ಹಾಗೂ ರಾಮಚಂದ್ರ ರಾಜು ಪಾತ್ರವರ್ಗದಲ್ಲಿದ್ದು ರವಿ ಬಸ್ರೂರ್ ಸಂಗೀತ ಚಿತ್ರಕ್ಕಿದೆ.