ಕೆಜಿಎಫ್-2 ಚಿತ್ರದಿಂದ ಬ್ರೇಕಿಂಗ್ ಸುದ್ದಿಯೊಂದು ಕೇಳಿ ಬರುತ್ತಿದೆ. ಇದೀಗ ಚಿತ್ರತಂಡದಿಂದ ಸಿಕ್ಕಿರುವ ಮಾಹಿತಿ ಪ್ರಕಾರ ‘ಕೆ.ಜಿ.ಎಫ್’ ಸೆಟ್​ಗೆ ಅಧೀರನ ಅಧಿಕೃತ ಎಂಟ್ರಿಯಾಗಿದೆ. ಇಡೀ ಭಾರತೀಯ ಚಿತ್ರರಂಗವೆ ಕುತೂಹದಿಂದ ಕಾಯುತ್ತಿರುವ ‘ಕೆಜಿಎಫ್-2’ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಚಿತ್ರದಲ್ಲಿ ಪ್ರಮುಖ ವಿಲನ್ ಅಧೀರ ಪಾತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿರೋದೆ. ಆದ್ರೀಗ ಸಂಜಯ್ ದತ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಈ ವಾರ ಪೂರ್ತಿ ದತ್ ಪಾತ್ರದ ಭಾಗ ಚಿತ್ರೀಕರಣ ಇರಲಿದೆಯಂತೆ. ಹಾಗಾಗಿ ಈಗಾಗಲೆ ಸಂಜಯ್ ದತ್ ಮೈಸೂರಿನಲ್ಲಿ ಬೀಡುಬಿಟ್ಟಿದ್ದು ಲಲಿತಾ ಮಹಲ್ ಪ್ಯಾಲೇಸ್ ಹೋಟೆಲ್ ಶೂಟಿಂಗ್‌ನಲ್ಲಿ ಸುಮಾರು ಒಂದು ವಾರ ಇರಲಿದ್ದಾರೆ.

ಅಲ್ಲದೆ ಸಂಜು ಬಾಬಾಗೆ ಟೈಟ್ ಸೆಕ್ಯೂರಿಟಿ ಕೂಡ ನೀಡಲಾಗಿದೆಯಂತೆ. ಸಂಜಯ್ ದತ್ ಮೈಸೂರಿಗೆ ಬಂದಿರುವ ಮಾಹಿತಿ ಗೊತ್ತಾದರೆ ಅಭಿಮಾನಿಗಳು ಮುಗಿ ಬೀಳುತ್ತಾರೆ. ಅಲ್ಲದೆ ಚಿತ್ರೀಕರಣ ಮಾಡಲು ಸಹ ಸಮಸ್ಯೆಯಾಗುತ್ತದೆ ಎಂದು ಸಂಜಯ್ ದತ್ ಚಿತ್ರೀಕರಣಕ್ಕೆ ಆಗಮಿಸಿರುವುದು ಎಲ್ಲೂ ಬಹಿರಂಗವಾಗದಂತೆ ಗೌಪ್ಯವಿಡಲಾಗಿದೆ. ಹಾಗೆಯೇ ಮೈಸೂರಿನ ಲಲಿತ ಮಹಲ್ ಪ್ಯಾಲೇಸ್​ಗೂ ಟೈಟ್ ಸೆಕ್ಯುರಿಟಿ ನೀಡಲಾಗಿದೆ ಎಂದು ಹೇಳಲಾಗಿದೆ .

ಒಟ್ಟಾರೆ ಬಿಗಿ ಭದ್ರತೆಯಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಸಂಜಯ್ ದತ್ ಬಗ್ಗೆಯಾಗಲಿ ಅವರ ಪಾತ್ರದ ಬಗ್ಗೆಯಾಗಲಿ ಯಾವುದೇ ಸುಳಿವನ್ನು ಬಿಟ್ಟುಕೊಟ್ಟಿಲ್ಲ ಕೆಜಿಎಫ್ ಚಿತ್ರತಂಡ. ಅಕ್ಟೋಬರ್ ವೇಳೆಗೆ ಚಿತ್ರದ ಸಂಪೂರ್ಣ ಚಿತ್ರೀಕರಣ ಮುಗಿಯಲಿದೆ ಮತ್ತು 2020 ರ ಬೇಸಿಗೆಯಲ್ಲಿ ಚಲನಚಿತ್ರವು ತೆರೆಗೆ ಬರಲಿದೆ ಎಂದು ವರದಿ ಹೇಳುತ್ತದೆ.

ಒಟ್ಟಿನಲ್ಲಿ 60 ವರ್ಷದ ಸಂಜುಬಾಬಾ ಹಾಗೂ ಯಶ್ ನಡುವಿನ ಕಾದಾಟ ಹೇಗಿರಲಿದೆ ಎಂಬ ಕುತೂಹಲ ಮಾತ್ರ ಸಿನಿಪ್ರಿಯರಲ್ಲಿ ಬಾಕಿ ಉಳಿದಿದೆ. ಯಾವಾಗ ತೆರೆಗೆ ಬರುತ್ತೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.