2019ರ ಫೆಬ್ರವರಿಯಲ್ಲಿ ತೆರೆಕಂಡ ‘ಬೆಲ್‌ ಬಾಟಂ’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್‌ ಆಯಿತು. ಇಡೀ ಸಿನಿಮಾ ರೆಟ್ರೋ ಲುಕ್‌ನಲ್ಲಿ ಮೂಡಿಬಂದಿತ್ತು. ಮೊದಲ ಬಾರಿಗೆ ನಾಯಕ ನಟನಾಗಿ ಕ್ಯಾಮರಾ ಎದುರಿಸಿದ್ದ ರಿಷಬ್‌ ಶೆಟ್ಟಿ, ತಮ್ಮದೇ ಮ್ಯಾನರಿಸಂನಿಂದ ಆ ಪಾತ್ರಕ್ಕೆ ಜೀವ ತುಂಬಿದ್ದರು. ನಾಯಕಿಯಾಗಿ ಹರಿಪ್ರಿಯಾ ಕೂಡ ಮಿಂಚಿದರು. ಇತರೆ ಭಾಷೆಗಳಿಗೆ ರಿಮೇಕ್‌ ಆಗಲಿದೆ ಎಂಬ ಸುದ್ದಿ ಬಹಳ ಹಿಂದೆಯೇ ಕೇಳಿಬಂತು. ಈಗ ಬೆಲ್‌ ಬಾಟಂ ಚಿತ್ರದ ತಮಿಳು ರಿಮೇಕ್‌ ಬಗ್ಗೆ ಹೆಚ್ಚುವರಿ ಮಾಹಿತಿ ಹೊರಬಿದ್ದಿದೆ. ಹೀರೋ-ಹೀರೋಯಿನ್‌, ನಿರ್ದೇಶಕ ಯಾರು ಎಂಬುದು ಕೂಡ ಬಹಿರಂಗ ಆಗಿದೆ. ವಿಶೇಷ ಏನೆಂದರೆ, ಕಾಲಿವುಡ್‌ನಲ್ಲೂ ಈ ಚಿತ್ರಕ್ಕೆ ‘ಬೆಲ್‌ ಬಾಟಂ’ ಎಂದೇ ಶೀರ್ಷಿಕೆ ಇಡಲಾಗಿದೆ.

ನಿರ್ದೇಶಕ ಸತ್ಯಶಿವ ತಮಿಳಿನಲ್ಲಿ ನಿರ್ದೇಶನ ಮಾಡಲಿದ್ದಾರೆ. ರಿಷಬ್ ಶೆಟ್ಟಿ ಅಭಿನಯಿಸಿದ್ದ ಪಾತ್ರವನ್ನು ತಮಿಳಿನ ನಟ ಕೃಷ್ಣ ಶೇಖರ್‌ ಮಾಡಿದ್ದಾರೆ. ಮಹಿಮಾ ನಂಬಿಯಾರ್ ನಾಯಕಿಯಾಗಲಿದ್ದು, ಹರಿಪ್ರಿಯಾ ಮಾಡಿದ್ದ ಪಾತ್ರ ಮಾಡಲಿದ್ದಾರೆ. ಮಹಿಮಾ ಮತ್ತು ಕೃಷ್ಣ ಕಾಂಬಿನೇಷನ್‌ ಈ ಸಿನಿಮಾದಲ್ಲಿ ಚೆನ್ನಾಗಿ ಮೂಡಿಬಂದಿದೆ ಎಂಬುದು ಅವರ ಹೇಳಿಕೆ. ಈಗಾಗಲೇ ಸಿನಿಮಾ ಶೂಟಿಂಗ್‌ ಕೂಡ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಜಾರಿಯಲ್ಲಿವೆ.