ಸಿನಿಪ್ರಿಯರ ವಲಯದಲ್ಲಿ ‘ಅವನೇ ಶ್ರೀಮನ್ನಾರಾಯಣ’ ಬಗ್ಗೆ ದೊಡ್ಡ ಮಟ್ಟದ ಕ್ರೇಜ್‌ ಸೃಷ್ಟಿಯಾಗಿದೆ. ಮೊದಲ ದಿನದ (ಡಿ.27) ಬಹುತೇಕ ಟಿಕೆಟ್‌ಗಳು ಸೋಲ್ಡ್‌ಔಟ್ ಆಗಿರುವುದೇ ಅದಕ್ಕೆ ಸಾಕ್ಷಿ. ಟೀಸರ್​​​​ , ಸಾಂಗ್ಸ್ ಹಾಗೂ ಟ್ರೈಲರ್​ ಮೂಲಕ ಬೆಟ್ಟದಷ್ಟು ನಿರೀಕ್ಷೆ ಹುಟ್ಟು ಹಾಕಿರುವ ‘ಅವನೇ ಶ್ರೀಮನ್ನಾರಾಯಣ’ ಆನ್​ಲೈನ್​ ಬುಕಿಂಗ್ 10 ದಿನಗಳ ಹಿಂದೆಯೇ ಆರಂಭಗೊಂಡಿತ್ತು. ಚಿತ್ರಮಂದಿರಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಬೆಂಗಳೂರಿನಲ್ಲೊಂದೇ ಶುಕ್ರವಾರ ಈ ಚಿತ್ರ 350ಕ್ಕೂ ಅಧಿಕ ಶೋಗಳು ಪ್ರದರ್ಶನ ಕಾಣುತ್ತಿವೆ. ಇನ್ನು ಅನೇಕ ಚಿತ್ರಮಂದಿರಗಳಲ್ಲಿ ಈಗಾಗಲೇ ಟಿಕೆಟ್​ಗಳು ಸೋಲ್ಡ್​​ ಔಟ್​ ಆಗಿವೆ. ಕನ್ನಡ ಚಿತ್ರವೊಂದು ಇಷ್ಟು ದೊಡ್ಡ ಮಟ್ಟಕ್ಕೆ ತೆರೆಕಾಣುತ್ತಿರುವುದು ವಿಶೇಷ. ಈ ಬಾರಿ ತೆರೆಕಂಡ ಉಳಿದ ಸಿನಿಮಾಗಳಿಗೆ ಹೋಲಿಸಿದರೆ ‘ಅವನೇ ಶ್ರೀಮನ್ನಾರಾಯಣ’ ಹವಾ ತುಂಬಾನೇ ಜೋರಾಗಿದೆ.

ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲಾಗಿದೆ. ರೈಲು, ಬಸ್‌, ಲಿಫ್ಟ್‌, ಆಟೋ ಸೇರಿದಂತೆ ಎಲ್ಲ ಕಡೆಗಳಲ್ಲೂ ಚಿತ್ರದ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಸಿನಿಮಾವನ್ನು ಎಷ್ಟು ಕಾಳಜಿಯಿಂದ ಮಾಡಲಾಗಿದೆಯೋ ಅಷ್ಟೇ ಕಾಳಜಿಯನ್ನು ಪ್ರಚಾರಕ್ಕೂ ವಹಿಸಿದ್ದಾರೆ ನಿರ್ಮಾಪಕರಾದ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಮತ್ತು ಪ್ರಕಾಶ್‌ ಹೆಚ್‌.ಕೆ. ಎಲ್ಲ ಚಿತ್ರಮಂದಿರದ ಎದುರು ರಕ್ಷಿತ್‌ ಶೆಟ್ಟಿ ಕಟೌಟ್‌ಗಳು ರಾರಾಜಿಸುತ್ತಿವೆ.

ಅವನೇ ಶ್ರೀಮನ್ನಾರಾಯಣ’ ಕನ್ನಡದಲ್ಲಿ ಡಿಸೆಂಬರ್​ 27ರಂದು ತೆರೆಗೆ ಬರುತ್ತಿದೆ. ತೆಲುಗಿನಲ್ಲಿ ಜನವರಿ 1, ತಮಿಳು-ಮಲಯಾಳಂನಲ್ಲಿ ಜನವರಿ 3 ಹಾಗೂ ಹಿಂದಿಯಲ್ಲಿ ಜನವರಿ 17ರಂದು ಸಿನಿಮಾ ರಿಲೀಸ್​ ಆಗುತ್ತಿದೆ.

ಈ ಚಿತ್ರಕ್ಕೆ ಹೊಸ ಪ್ರತಿಭೆ ಸಚಿನ್‌ ನಿರ್ದೇಶನ ಮಾಡಿದ್ದು, ಅಜನೀಶ್‌ ಲೋಕನಾಥ್‌ ಹಾಗೂ ಚರಣ್‌ ರಾಜ್‌ ಸಂಗೀತ ಸಂಯೋಜಿಸಿದ್ದಾರೆ. ರಕ್ಷಿತ್‌ಗೆ ಜೋಡಿಯಾಗಿ ಶಾನ್ವಿ ಶ್ರೀವಾಸ್ತವ ಬಣ್ಣ ಹಚ್ಚಿದ್ದಾರೆ. ಪೋಷಕ ಪಾತ್ರಧಾರಿಗಳ ತಂಡವೂ ದೊಡ್ಡದಿದೆ. ಅಚ್ಯುತ್‌ ಕುಮಾರ್‌, ಬಾಲಾಜಿ ಮನೋಹರ್‌, ರಿಷಬ್‌ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ, ಪ್ರಮೋದ್‌ ಶೆಟ್ಟಿ ಮುಂತಾದವರು ನಟಿಸಿದ್ದಾರೆ.